ನಾನು ಬಾಣಸವಾಡಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಕಾಲ; 1980ರ ದಶಕ. ಒಂದು ದಿನ ಅಜ್ಜಿಯೊಬ್ಬರು ಠಾಣೆಯೊಳಗೆ ನಿಧಾನವಾಗಿ ನಡೆಯುತ್ತಾ ಬಂದರು. ಕೈಯಲ್ಲಿ ಲೋಟವಿತ್ತು. ಅದನ್ನು ಮೇಜಿನ ಮೇಲೆ ಇಟ್ಟವರೇ, ‘ಕುಡಿಯಪ್ಪಾ’ ಎಂದು ನಮ್ರ ದನಿಯಲ್ಲಿ ಕೇಳಿಕೊಂಡರು. ಆ ಲೋಟದಲ್ಲಿ ಕಾಫಿ ಇತ್ತು. ನನ್ನ ಮುಖವನ್ನೇ ದಿಟ್ಟಿಸುತ್ತಾ ನಿಂತ ಆ ಅಜ್ಜಿಗೆ ಕುಳಿತುಕೊಳ್ಳುವಂತೆ ಹೇಳಿದೆ. ನನಗೆ ಯಾಕೆ ಕಾಫಿ ಎಂದೂ ಪ್ರಶ್ನಿಸಿದೆ. ‘ನೀನು ನನ್ನ ಮೊಮ್ಮಗನ ತರಹ ಇದ್ದೀಯ... ಕುಡಿ ಕುಡಿ’ ಎಂದಷ್ಟೇ ಹೇಳಿದರು. ಪರಿಚಯವೇ ಇಲ್ಲದ ಒಬ್ಬರು ಹಾಗೆ ನಾವಿರುವಲ್ಲಿಗೇ ಬಂದು ಕಾಫಿ ಕೊಡುವುದೇ ಅಪರೂಪ. ಅಜ್ಜಿ ಅಷ್ಟೊಂದು ಕೇಳಿಕೊಂಡಿದ್ದರಿಂದ ಕುಡಿಯದೇ ನನಗೆ ವಿಧಿಯಿರಲಿಲ್ಲ. ನಾನು ಕಾಫಿ ಕುಡಿಯುವವರೆಗೆ ಕುರ್ಚಿ ಮೇಲೆ ಕುಳಿತು ಎಲೆಅಡಿಕೆ ಹಾಕಿಕೊಳ್ಳುತ್ತಿದ್ದ ಅಜ್ಜಿ ಸ್ವಲ್ಪ ಹೊತ್ತಿನ ನಂತರ ಲೋಟ ತೆಗೆದುಕೊಂಡು ಹೊರಟುಬಿಟ್ಟರು.
ಕೆಲವು ದಿನಗಳ ನಂತರ ಅದೇ ಅಜ್ಜಿ ಮತ್ತೆ ಬಂದರು. ಕೈಯಲ್ಲಿ ಹಾಗೆಯೇ ಕಾಫಿ ಲೋಟ. ಎಲ್ಲವೂ ಮೊದಲಿನಂತೆಯೇ. ಆದರೆ, ಈ ಸಲ ನಮ್ಮ ನಡುವೆ ಮಾತು ತುಸು ಮುಂದುವರಿಯಿತು. ಚಿಕ್ಕಬಾಣಸವಾಡಿಯಲ್ಲಿ (ಬಾಣಸವಾಡಿ ಆಗ ಹಳ್ಳಿಯ ಸ್ವರೂಪದಲ್ಲೇ ಇತ್ತು) ವಾಸವಿದ್ದ ಆ ಅಜ್ಜಿಯ ಮೊಮ್ಮಗ ಹಾವು ಕಚ್ಚಿ ಮೃತಪಟ್ಟಿದ್ದ. ಅವನು ನನ್ನನ್ನೇ ಹೋಲುತ್ತಿದ್ದನಂತೆ. ಅದೊಂದೇ ಕಾರಣಕ್ಕೆ ಅಜ್ಜಿ ಆಗಾಗ ನೋಡಿಕೊಂಡು ಹೋಗುವುದಾಗಿ ವಿನಂತಿಸಿಕೊಂಡರು. ಯಾವುದೇ ಸ್ವಾರ್ಥವಿಲ್ಲದ ಇಳಿಜೀವವೊಂದು ಅಂಥ ಬೇಡಿಕೆ ಮುಂದಿಟ್ಟರೆ ನನ್ನಂಥ ಯುವಕ ಮಣಿಯದೆ ಇರಲು ಹೇಗೆ ಸಾಧ್ಯ? ಆ ಅಜ್ಜಿ ಯಾವಾಗ ಬಂದರೂ ಒಳಗೆ ಬಿಡಬೇಕೆಂದು ಠಾಣೆಯಲ್ಲಿರುವ ಎಲ್ಲರಿಗೂ ಸೂಚಿಸಿದೆ. ಅಜ್ಜಿ ಆಗಾಗ ಮನೆಯಿಂದ ಏನಾದರೂ ತಿಂಡಿ ಕೂಡ ಮಾಡಿಕೊಂಡು ತರಲು ಪ್ರಾರಂಭಿಸಿದರು.
ಬಿಡಿಎ, ರೈಲ್ವೆ ಇಲಾಖೆ ಮೊದಲಾದವರು ಆಗ ವಿವಿಧ ಯೋಜನೆಗಳಿಗೆ ಜಮೀನುಗಳನ್ನು ವಶಪಡಿಸಿಕೊಂಡರು. ಆಗ ಅಜ್ಜಿಗೆ ಸೇರಿದ್ದ ಜಮೀನಿಗೂ ಬೆಲೆ ಸಿಕ್ಕಿತು. ಇದ್ದಕ್ಕಿದ್ದಂತೆ ಕೈತುಂಬಾ ಹಣ ಬಂತು. ಅದುವರೆಗೆ ಹತ್ತಿರ ಬರದಿದ್ದ ಅಜ್ಜಿಯ ನೆಂಟರಿಷ್ಟರೆಲ್ಲಾ ಅವರ ಬಳಿ ಸುಳಿದಾಡತೊಡಗಿದರು. ಬಂದ ಹಣವನ್ನು ಏನು ಮಾಡಬೇಕೆಂಬ ಯೋಚನೆ ಹೊತ್ತು ಅಜ್ಜಿ ನನ್ನ ಬಳಿಗೆ ಬಂದರು. ಯಾರ್ಯಾರಿಗೆ ಎಷ್ಟೆಷ್ಟು ಭಾಗ ಮಾಡಬೇಕು ಎಂಬುದನ್ನು ಕೇಳಿಕೊಂಡು ಅಷ್ಟನ್ನು ಹಂಚಿದ್ದಾಯಿತು. ಉಳಿಕೆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿಗಳ ರೂಪದಲ್ಲಿಡುವಂತೆ ಸೂಚಿಸಿದೆ. ಅಜ್ಜಿಯ ಪಾಲಿಗೆ ಆಗ ನಾನೇ ಆರ್ಥಿಕ ಸಲಹೆಗಾರ.
ಬಂದ ಹಣಕ್ಕೆ ಸರಿಯಾದ ದಾರಿ ತೋರಿಸಿದ್ದರಿಂದ ಅಜ್ಜಿಗೆ ನೆಮ್ಮದಿ ಸಿಕ್ಕಿತು. ಅಲ್ಲಿಂದಾಚೆಗೆ ನನ್ನ ಮೇಲೆ ಅವರ ಮಮತೆಯ ಸುರಿಮಳೆ. ನಾನು ರಾತ್ರಿ ರೌಂಡ್ಸ್ ಹೋಗಿ ಠಾಣೆಗೆ ಬಂದರೆ ಇದ್ದಕ್ಕಿದ್ದಂತೆ ಬಂದು, ‘ಇಷ್ಟು ಹೊತ್ತಿನಲ್ಲೂ ಓಡಾಡಬೇಕೆ’ ಎಂದು ಕಾಳಜಿಯಿಂದ ಕೇಳುತ್ತಿದ್ದರು. ಆಗಾಗ ನಾನೂ ಸೇರಿದಂತೆ ನಮ್ಮ ಠಾಣೆಯ ಎಲ್ಲಾ ಪೊಲೀಸರಿಗೂ ದೃಷ್ಟಿ ತೆಗೆದು ನೀರು ಚೆಲ್ಲುತ್ತಿದ್ದರು. ಯಾವ ದುರುದ್ದೇಶವೂ ಅವರಿಗೆ ಇರಲಿಲ್ಲವಾದ್ದರಿಂದ ಪ್ರೀತಿ ಬೆರೆತಿದ್ದ ಅವರ ಯಾವ ನಡವಳಿಕೆಯನ್ನೂ ನಮ್ಮ ಠಾಣೆಯ ಸಿಬ್ಬಂದಿ ಪ್ರಶ್ನಿಸುತ್ತಿರಲಿಲ್ಲ. ಬೇಸರ ಕೂಡ ಪಟ್ಟುಕೊಳ್ಳುತ್ತಿರಲಿಲ್ಲ.
‘ನಂಗಾಗಿ ಇಷ್ಟೆಲ್ಲಾ ಮಾಡಿದೆ. ನನ್ನ ನೆನಪಾಗಿ ನಿನಗೆ ಏನಾದರೂ ಕೊಡಬೇಕಂತ ಆಸೆ ಆಗ್ತಿದೆ’ ಅಂತ ಅಜ್ಜಿ ಹೇಳಿದರು. ಹಾಗೆ ಏನಾದರೂ ಕೊಟ್ಟರೆ ಅದೇ ನಮಗೆ ಅಭ್ಯಾಸವಾಗಿ ಹೋಗುತ್ತೆ, ಬೇಡ ಎಂದೆ. ಅಜ್ಜಿ ಕೇಳಲಿಲ್ಲ. ಒಂದು ದಿನ ಚಿನ್ನದ ಕಪಾಲಿ ಉಂಗುರ ಹಿಡಿದುಕೊಂಡು ಬಂದರು. ‘ನನ್ನ ನೆನಪಿಗಾಗಿ ಇದನ್ನು ಹಾಕಿಕೊಳ್ಳಲೇಬೇಕು’ ಎಂದು ದುಂಬಾಲುಬಿದ್ದರು. ಅಷ್ಟು ದೊಡ್ಡ ಉಂಗುರವನ್ನು ನಾನು ಹಾಕಿಕೊಳ್ಳೋಲ್ಲ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಅಜ್ಜಿ ಚಿನ್ನದ ಕೆಲಸ ಮಾಡುವವನನ್ನು ಅಲ್ಲಿಗೇ ಕರೆಸಬೇಕೆ? ‘ನಿಂಗೆ ಹೆಂಗೆ ಬೇಕೋ ಅಂಥದ್ದೇ ಮಾಡಿಸಿಕೋ’ ಅಂತ ಪೇಚಿಗೆ ಸಿಲುಕಿಸಿದರು. ಎಷ್ಟೇ ಬೇಡವೆಂದರೂ ಜಗ್ಗಲಿಲ್ಲ. ಸ್ವಲ್ಪ ಖಾರವಾಗಿ ಮಾತನಾಡಿದ್ದೇ, ಕಣ್ಣಲ್ಲಿ ನೀರು ತುಂಬಿಕೊಂಡು ಬಿಕ್ಕತೊಡಗಿದರು. ವಿಧಿಯಿಲ್ಲದೆ ಸುಮ್ಮನಾದೆ. ಚಿನ್ನದ ಕೆಲಸ ಮಾಡುವವನು ನನ್ನ ಹುಟ್ಟಿದ ತಾರೀಖು ಕೇಳಿಕೊಂಡು ಅದಕ್ಕೆ ಹೊಂದುವ ಕಲ್ಲನ್ನು ಹಾಕಿ ಒಂದು ಉಂಗುರ ಮಾಡಿಕೊಟ್ಟ. ಅಜ್ಜಿ ತಾವೇ ಆ ಉಂಗುರವನ್ನು ಬೆರಳಿಗೆ ತೊಡಿಸಿದರು. ‘ಇನ್ನು ಮುಂದೆ ಇದು ಯಾವಾಗಲೂ ನಿನ್ನ ಬೆರಳಲ್ಲಿ ಇರಬೇಕು’ ಎಂದು ಆಜ್ಞೆಯನ್ನೂ ಹೊರಡಿಸಿದರು. ಅಜ್ಜಿಯಲ್ಲಿ ಇದ್ದ ತಾಯಿ ಮನಸ್ಸು ನನ್ನ ಬಾಯನ್ನು ಕಟ್ಟಿಹಾಕಿತು.
ಇದ್ದಕ್ಕಿದ್ದಂತೆ ಅಜ್ಜಿ ಠಾಣೆಗೆ ಬರುವುದನ್ನು ನಿಲ್ಲಿಸಿದರು. ಅವರ ನೆಂಟರೊಬ್ಬರನ್ನು ಕರೆಸಿ ವಿಚಾರಿಸಿದೆ. ಅವರಿಗೆ ಗಂಟಲಿನ ಕ್ಯಾನ್ಸರ್ ಆಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಹಾಸಿಗೆಯ ಮೇಲಿದ್ದಾರೆ ಎಂದು ಗೊತ್ತಾಯಿತು. ನನ್ನ ಅಕ್ಕ ಡಾ.ಬಿ.ಕೆ.ಶಾಲಿನಿ ಆಗ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದರು. ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಅಡಿಷನಲ್ ಡೈರೆಕ್ಟರ್ ಆಗಿ ಕೆಲಸ ಮಾಡಿ ನಿವೃತ್ತರಾದವರು ನನ್ನ ಅಕ್ಕ. ನಾನು ಆಸ್ಪತ್ರೆಗೆ ಹೋಗಿ ಅಜ್ಜಿಯನ್ನು ಕಂಡೆ. ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುವಂತೆ ನನ್ನ ಅಕ್ಕನನ್ನು ಕೇಳಿಕೊಂಡೆ. ಕ್ಯಾನ್ಸರ್ ಕೊನೆಯ ಹಂತ ತಲುಪಿದ್ದರಿಂದ ಅವರನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅಕ್ಕ ಹೇಳಿದಾಗ ನನಗೆ ದುಃಖವಾಯಿತು.
ಇನ್ನು ಅಜ್ಜಿ ಬದುಕುವುದು ಕಷ್ಟ ಎಂಬುದು ಸ್ಪಷ್ಟವಾಯಿತು. ನಾನು ವಾರ್ಡ್‌ಗೆ ಹೋದೆ. ಅಜ್ಜಿಗೆ ಮಾತೇ ಹೊರಡಲಿಲ್ಲ. ಹತ್ತಿರ ಹೋಗಿ ಕೂತೆ. ನನ್ನ ಎರಡೂ ಕೈಗಳನ್ನು ಎಳೆದುಕೊಂಡರು. ಬೆರಳುಗಳ ಮೇಲೆ ಕಣ್ಣಾಡಿಸಿದರು. ಅಂದು ತೊಡಿಸಿದ್ದ ಉಂಗುರ ಅಲ್ಲಿದೆಯೇ ಎಂಬುದನ್ನು ಆ ಸ್ಥಿತಿಯಲ್ಲೂ ಖಾತರಿಪಡಿಸಿಕೊಳ್ಳುವ ತವಕ ಅವರದ್ದು.
ಉಂಗುರ ಕಂಡು ಅವರ ಮುಖ ಅರಳಿತು. ಆ ಕೈಯನ್ನು ಎಳೆದುಕೊಂಡು ತಮ್ಮ ತಲೆಗೆ ಅದುಮಿ ಹಿಡಿದರು. ಒಳ್ಳೆಯದಾಗಲಿ ಎಂಬಂತೆ ನನಗೆ ಆಶೀರ್ವಾದ ಮಾಡಿದರು. ಒಂದಿನಿತೂ ಸ್ವಾರ್ಥವಿಲ್ಲದೆ ನನ್ನನ್ನು ಪ್ರೀತಿಸಿದ ಅಜ್ಜಿಯ ಕಣ್ಣಲ್ಲಿ ಆ ದಿನ ಕಂಡ ದಿವ್ಯವಾದ ಕಕ್ಕುಲತೆಯನ್ನು ನಾನು ಮರೆಯಲಾರೆ. ವಾರ್ಡ್‌ನಿಂದ ಹೊರಬಂದಾಗ ನನ್ನಲ್ಲೂ ಮೌನ ಆವರಿಸಿತ್ತು. ಮರುದಿನವೇ ಅಜ್ಜಿ ಹೋಗಿಬಿಟ್ಟರು ಎಂಬ ಸುದ್ದಿ ಕಿವಿಮೇಲೆ ಬಿತ್ತು. ಮುಂದೆ ಯಾರೂ ಆ ಅಜ್ಜಿಯಂತೆ ಠಾಣೆಗೆ ಇದ್ದಕ್ಕಿಂದ್ದಂತೆ ಕಾಫಿ ತಂದುಕೊಡಲೇ ಇಲ್ಲ.
*
ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಇಲಾಖೆಯ ಮಾಹಿತಿದಾರನೊಬ್ಬನಿಗೆ ಒಂದು ಕೆಲಸ ಕೊಡಿಸಿ ಎಂದು ಬಿ.ಬಿ.ಅಶೋಕ್ ಕುಮಾರ್ (ಈಗ ಅವರು ಎಸಿಪಿ ಆಗಿ ಕೆಲಸ ಮಾಡುತ್ತಿದ್ದಾರೆ) ನನ್ನನ್ನು ಕೇಳಿಕೊಂಡರು.
ಅಶೋಕನಗರ ಠಾಣೆಯ ವ್ಯಾಪ್ತಿಯಲ್ಲಿ ಹಲವಾರು ಬಾರ್ ಮತ್ತು ರೆಸ್ಟೋರೆಂಟ್‌ಗಳಿದ್ದವು. ಆ ಪೈಕಿ ಒಂದರಲ್ಲಿ ಅವನಿಗೆ ಕೆಲಸ ಕೊಡಿಸಿದೆ. ಇಬ್ಬರು ಹೆಣ್ಣು ಮಕ್ಕಳಿದ್ದ ಸಂಸಾರ ಅವನದ್ದು. ಕೆಲಸ ಸಿಕ್ಕಿದ್ದೇ ಖುಷಿಪಟ್ಟ. ನಿಯತ್ತಿನಿಂದ ಕೆಲಸ ಮಾಡಿಕೊಂಡಿದ್ದ. ರೌಡಿಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದ. ತಿಂಗಳಲ್ಲಿ ಒಮ್ಮೆ ಅವನು ನನ್ನನ್ನು ಕಾಣಲು ಬರುತ್ತಿದ್ದ. ಬಂದಾಗ ಚಾಕೊಲೇಟನ್ನೋ, ಸಿಹಿಯನ್ನೋ ತರುತ್ತಿದ್ದ. ‘ನಿಮಗೆ ಸಿಹಿ ಕೊಟ್ಟರೆ ನನಗೆ ಏನೋ ಸಮಾಧಾನ’ ಎನ್ನುತ್ತಿದ್ದ.
ಒಮ್ಮೆ ಅವನು ಬಂದಾಗ ಕೈಲಿ ಸಿಹಿ ಇರಲಿಲ್ಲ. ಸುಮ್ಮನೆ ನಿಂತು ಅಳತೊಡಗಿದ. ಸಮಾಧಾನಪಡಿಸಿ ಕೇಳಿದಾಗ ಗೊತ್ತಾಯಿತು- ಅವನ ಒಬ್ಬಳು ಮಗಳು ಮೂತ್ರಕೋಶದ ವೈಫಲ್ಯದಿಂದ ಕೆಲವೇ ದಿನಗಳ ಹಿಂದೆ ಮೃತಪಟ್ಟಿದ್ದಳು. ಬೇಸರವಾಯಿತು.
ಒಂದೂವರೆ ವರ್ಷದ ನಂತರ ಒಮ್ಮೆ ಫೋನ್ ಮಾಡಿ, ‘ನನ್ನ ಎರಡನೇ ಮಗಳೂ ಹೋಗಿಬಿಟ್ಟಳು. ತಾವು ಬರುವವರೆಗೆ ಹೆಣ ಎತ್ತುವುದಿಲ್ಲ’ ಎಂದ. ಮನೆಮುಂದೆ ಜನವೋ ಜನ. ಅವನ ಇನ್ನೊಬ್ಬ ಮಗಳೂ ಮೂತ್ರಕೋಶದ ತೊಂದರೆಯಿಂದಲೇ ಹೋಗಿಬಿಟ್ಟಿದ್ದಳು. ಆ ವ್ಯಕ್ತಿಯ ಹೆಂಡತಿಯ ದುಃಖ ಕಂಡು ನಾನು ಸ್ತಂಭೀಭೂತನಾದೆ.
ಮನೆಯ ಒಳಗಡೆ ಹೋದರೆ ಆಶ್ಚರ್ಯ. ನನ್ನ ಹಾಗೂ ಅಶೋಕ್‌ಕುಮಾರ್ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲಾ ಸುದ್ದಿಯನ್ನೂ ಕತ್ತರಿಸಿ ಅವನು ಕ್ಯಾಲೆಂಡರ್‌ನಂತೆ ಮನೆತುಂಬಾ ನೇತುಹಾಕಿಬಿಟ್ಟಿದ್ದ. ಇಂಥ ಜನರೂ ಇರುತ್ತಾರಾ ಎಂದು ನನಗನ್ನಿಸಿತು. ‘ನೀವು ಒಂದು ಕೆಲಸ ಕೊಡಿಸಿ ಬದುಕುವ ದಾರಿ ತೋರಿಸಿದಿರಿ. ಆದರೆ, ವಿಧಿ ಎರಡೂ ಮಕ್ಕಳನ್ನು ಕಿತ್ತುಕೊಂಡಿತು’ ಎಂದು ಅವನು ಬಿಕ್ಕಿದ. ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡ ಎಂದು ಅವನಿಗೆ ತಿಳಿಹೇಳಿದೆ.
ಕೆಲವು ತಿಂಗಳ ನಂತರ ಅವನು ಮತ್ತೆ ನನ್ನಲ್ಲಿಗೆ ಬಂದ. ಯಾವುದಾದರೂ ಅನಾಥಾಶ್ರಮ ಗೊತ್ತಿದ್ದರೆ ಒಂದು ಮಗುವನ್ನು ದತ್ತು ಕೊಡಿಸಿರೆಂದು ಕೇಳಿದ. ಪ್ರಭುಸ್ವಾಮಿ ಎಂಬ ನನ್ನ ‘ಬ್ಯಾಚ್‌ಮೇಟ್’ ಇದ್ದರು. ಅವರೀಗ ಡಿವೈಎಸ್ಪಿ ಆಗಿದ್ದಾರೆ.
ಅವರಿಗೆ ಅನಾಥಾಶ್ರಮಗಳ ಸಂಪರ್ಕವಿತ್ತು. ಒಂದು ಅನಾಥಾಶ್ರಮದಿಂದ ಕಾನೂನುಬದ್ಧವಾಗಿ ಹೆಣ್ಣು ಮಗುವನ್ನು ದತ್ತು ಕೊಡಿಸಿದರು. ಆ ಶುಭದಿನ ಕನ್ನಡ ರಾಜ್ಯೋತ್ಸವ. ಅವನು ನಾಮಕರಣಕ್ಕೂ ನನ್ನನ್ನು ಕರೆದ. ರಾಜ್ಯೋತ್ಸವದ ದಿನ ದತ್ತುಪಡೆದ ಆ ಮಗುವಿಗೆ ರಾಜೇಶ್ವರಿ ಎಂದು ಹೆಸರಿಟ್ಟ. ಈಗಲೂ ಪ್ರತಿ ನವೆಂಬರ್ 1ನೇ ತಾರೀಖು ಬಂದು, ಅವನು ಸಿಹಿ ಕೊಡುತ್ತಾನೆ. ಅವನ ಮಗಳ ಹುಟ್ಟುಹಬ್ಬದಲ್ಲಿ ಪಾಲುದಾರನೆಂಬ ಹೆಮ್ಮೆ ನನ್ನದು. ಆ ಹೆಣ್ಣುಮಗು ಈಗ ದೊಡ್ಡವಳಾಗಿದ್ದಾಳೆ.
ಚೆನ್ನಾಗಿ ಓದುತ್ತಿದ್ದಾಳೆ. ವಿಧಿ ಕೊಟ್ಟ ಏಟಿನಿಂದಾದ ದುಃಖ ಮರೆತು, ಬದುಕು ಕಟ್ಟಿಕೊಂಡ ಇಂಥವರನ್ನು ನೋಡಿದಾಗ, ನೆನೆದಾಗಲೆಲ್ಲಾ ನನ್ನಲ್ಲಿ ಜೀವನಪ್ರೀತಿಯ ಒರತೆ ಉಕ್ಕುತ್ತದೆ.

No comments:
Post a Comment