ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ನಾನು ಕೆಲಸ ಮಾಡುತ್ತಿದ್ದ ಸಂದರ್ಭ. ಒಮ್ಮೆ ಅಲ್ಲಿಗೆ ಅಂಧ ದಂಪತಿ ಬಂದರು. ಅಂಧರು ಬಂದು ಹಣಕಾಸಿನ ಸಹಾಯ ಕೇಳುವುದು ನಮಗೆ ಹೊಸ ಅನುಭವವೇನೂ ಆಗಿರಲಿಲ್ಲ. ಅವರೂ ಒಂದಿಷ್ಟು ಹಣ ಕೇಳಲು ಬಂದಿರಬೇಕು ಎಂದು ನಾನಂದುಕೊಂಡೆ.
ಕೆಲವೇ ಕ್ಷಣಗಳಲ್ಲಿ ಅವರು, ‘ನಾವು ಹಣ ಕೇಳಲು ಬಂದಿಲ್ಲ. ನಾವು ಭಿಕ್ಷುಕರೂ ಅಲ್ಲ’ ಎಂದರು. ಮಾತಿನಿಂದ ಅವರು ನೇರವಾಗಿ ನನಗೆ ತಿವಿದಂತಾಯಿತು. ಯಾಕೆಂದರೆ, ನಾನು ಮನಸ್ಸಿನಲ್ಲಿ ಅವರು ಹಣ ಕೇಳಲೇ ಬಂದಿದ್ದಾರೆ ಎಂದುಕೊಂಡಿದ್ದು ಸತ್ಯವಾಗಿತ್ತು. ಅವರ ಒಳಗಿವಿಗೆ ನನ್ನ ಮನದ ಮಾತನ್ನು ಅಷ್ಟು ಸ್ಪಷ್ಟವಾಗಿ ಕೇಳಿತ್ತು. ಸ್ವಲ್ಪ ಹೊತ್ತು ನನಗೂ ಏನೂ ಮಾತನಾಡಲು ತೋಚಲಿಲ್ಲ. ಆಮೇಲೆ ಅವರೇ ತಾವು ಬಂದ ಉದ್ದೇಶ ಹೇಳಿಕೊಂಡರು.
ಅವರು ಇಷ್ಟಪಟ್ಟು ಮದುವೆಯಾಗಿದ್ದರು. ಇಬ್ಬರಿಗೂ ಕಣ್ಣಿರಲಿಲ್ಲ. ಅಂಧರಿಗೆ ಸಿಗುವ ಕೆಲಸ ಕೂಡ ಲಭಿಸಿರಲಿಲ್ಲ. ಭಿಕ್ಷೆ ಬೇಡಿ ಬದುಕುವುದು ಅವರಿಗೆ ಇಷ್ಟವಿರಲಿಲ್ಲ. ‘ಹಾಡು ಹೇಳುವುದು ಬಿಟ್ಟು ನಮಗೆ ಬೇರೇನೂ ಬರುವುದಿಲ್ಲ’ ಎಂದರು. ನಾವು ಒಂದು ಪಲ್ಲವಿ, ಚರಣ ಹಾಡುವಂತೆ ಕೇಳಿದೆವು. ಇಬ್ಬರೂ ತನ್ಮಯತೆಯಿಂದ ಹಾಡಿದರು. ಇಬ್ಬರ ಸಿರಿಕಂಠ. ಕಣ್ಣಿಲ್ಲದಿದ್ದರೂ ಗೀತೆಯ ಮೂಲಕವೇ ಜಗತ್ತನ್ನು ಕಾಣುವಷ್ಟು ಪ್ರಖರವಾಗಿದ್ದ ಹಾಡುಗಾರಿಕೆ.
ಹಣ ಬೇಡವೆಂದ ಅವರು ಬಂದದ್ದಾದರೂ ಯಾಕೆ ಎಂಬ ಪ್ರಶ್ನೆ ನನ್ನಲ್ಲಿ ಉಳಿದಿತ್ತು. ಹಾಡು ಮುಗಿದ ನಂತರ ನಾನೇ ತಮಗೇನು ಸಹಾಯ ಬೇಕು ಎಂದು ಕೇಳಿದೆ.
‘ನಮಗೆ ಒಂದು ಹಾರ್ಮೋನಿಯಂ, ಕಂಜಿರಾ ಕೊಡಿಸಿ. ಅದನ್ನು ಬಳಸಿ ಹಳ್ಳಿಗಳಲ್ಲಿ ಹರಿಕಥೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ’ ಎಂದರು. ಠಾಣೆ ಯಲ್ಲಿದ್ದವರೆಲ್ಲಾ ಒಂದಿಷ್ಟು ಹಣ ಸೇರಿಸಿ ಅವರಿಗೆ ಹಾರ್ಮೋನಿಯಂ, ಕಂಜಿರಾ ಕೊಡಿಸಿದೆವು.
***
ನಾನು ಕೋದಂಡರಾಮಪುರದ ಕಾರ್ಪೊರೇಷನ್ ಪ್ರೌಢಶಾಲೆಯಲ್ಲಿ ಓದಿದವನು. ಬಾಲ್ಯದಲ್ಲಿ ನಾನು, ಗೆಳೆಯರು ಶ್ರದ್ಧೆಯಿಂದ ಕಬಡ್ಡಿ ಆಡುತ್ತಿದ್ದೆವು. ಕ್ರಮೇಣ ಯಂಗ್‌ಸ್ಟರ್ಸ್ ಕಬಡ್ಡಿ ಕ್ಲಬ್ ರೂಪುಗೊಂಡಿತು. ನಾವೆಲ್ಲಾ ಆ ಕ್ಲಬ್‌ನ ಪರವಾಗಿಯೇ ಆಡುತ್ತಿದ್ದುದು. ಅನೇಕರಿಗೆ ಕೆಲಸ ಕೊಡಿಸಿದ ರಾಷ್ಟ್ರದ ಪ್ರತಿಷ್ಠಿತ ಕಬಡ್ಡಿ ಕ್ಲಬ್ ಅದು.
ಆಗ ನಮ್ಮ ಜೊತೆ ದೊರೆಸ್ವಾಮಿ ಎಂಬುವನು ಆಡುತ್ತಿದ್ದ. ನಮಗಿಂತ ದೊಡ್ಡ ಪ್ರಾಯದವ. ಗಟ್ಟಿಮುಟ್ಟಾಗಿದ್ದ. ಅಂಥವರಿದ್ದರೆ ಆಟವನ್ನು ಚೆನ್ನಾಗಿ ಕಲಿಯಬಹುದು. ಹಾಗಾಗಿ ಅವನನ್ನೂ ನಮ್ಮ ಜೊತೆ ಆಡಿಸುತ್ತಿದ್ದೆವು. ನಾವೆಲ್ಲಾ ಅವನನ್ನು ‘ಬಂಡಿ’ ಎಂದೇ ಕರೆಯುತ್ತಿದ್ದದ್ದು.
ನಾನು ಮುಂದೆ ಸಬ್ ಇನ್ಸ್‌ಪೆಕ್ಟರ್ ಆದೆ. ಅವನು ಹೆಸರಿಗೆ ತಕ್ಕಂತೆ ಬಂಡಿ ಗಾಡಿ ಓಡಿಸಿಕೊಂಡಿದ್ದ. ಸಿಮೆಂಟು, ಇಟ್ಟಿಗೆ, ಜಲ್ಲಿ ಮೊದಲಾದ ಸರಕು ಸಾಗಿಸಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ. ನಾನು ಮೋಟಾರ್ ಬೈಕ್‌ನಲ್ಲಿ ಓಡಾಡುತ್ತಿದ್ದೆ. ಎಲ್ಲಿ ಎದುರಿಗೆ ಸಿಕ್ಕರೂ ಅವನು ಕೈಯೆತ್ತಿ ‘ವಿಶ್’ ಮಾಡುತ್ತಿದ್ದ. ನಾನೂ ವಿಶ್ ಮಾಡುತ್ತಿದ್ದೆ.
ಬಿಡುವಿದ್ದಾಗ ನಮ್ಮ ನಡುವೆ ಒಂದೆರಡೂ ಮಾತುಗಳೂ ವಿನಿಮಯವಾಗುತ್ತಿದ್ದವು. ಹತ್ತು ವರ್ಷ ಹೀಗೇ ಕಳೆಯಿತು. ಆಮೇಲೆ ನನಗೆ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಸಿಕ್ಕಿತು. ಆಮೇಲೆ ಜೀಪಿನಲ್ಲಿ ಓಡಾಡತೊಡಗಿದೆ. ಆಗಲೂ ದೊರೆಸ್ವಾಮಿ ನನ್ನನ್ನು ‘ವಿಶ್’ ಮಾಡುವುದನ್ನು ಬಿಡಲಿಲ್ಲ.
ಕೆಲವು ದಿನಗಳ ನಂತರ ಒಮ್ಮೆ ಅವನು ನಮ್ಮ ಜೀಪು ಹಾದುಹೋದ ಸ್ಥಳದಿಂದ ತುಸು ದೂರದಲ್ಲೇ ನಿಂತಿದ್ದ. ನಾನು ‘ವಿಶ್’ ಮಾಡಿದರೂ ಸುಮ್ಮನಿದ್ದ. ಹೀಗೆಯೇ ಎರಡು ಮೂರು ಸಲ ಆಯಿತು. ಅವನು ನನಗೆ ಯಾಕೆ ‘ವಿಶ್’ ಮಾಡುತ್ತಿಲ್ಲ ಎಂಬ ಪ್ರಶ್ನೆ ಕಾಡತೊಡಗಿತು. ನನ್ನಿಂದ ಏನಾದರೂ ತಪ್ಪಾಯಿತೇ ಅಥವಾ ಯಾರಾದರೂ ವೃತ್ತಿ ಮಾತ್ಸರ್ಯದ ಕಾರಣಕ್ಕೆ ಅವನ ಕಿವಿ ಚುಚ್ಚಿದರೇ ಎಂಬ ಅನುಮಾನ ಶುರುವಾಯಿತು.
ನನಗೆ ಸುಮ್ಮನಿರಲು ಆಗಲಿಲ್ಲ. ದೊರೆಸ್ವಾಮಿಯನ್ನು ಬಲ್ಲ ಮತ್ತೊಬ್ಬ ಸ್ನೇಹಿತನನ್ನು ಕರೆಸಿದೆ. ಯಾಕೋ ಇತ್ತೀಚೆಗೆ ನನ್ನನ್ನು ಕಂಡರೂ ಅವನು ಸ್ಪಂದಿಸುತ್ತಿಲ್ಲವೆಂದು ಹೇಳಿದೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಅವನೇ ಹೇಳಲಿ, ಅವನನ್ನು ಕರೆದುಕೊಂಡು ಬನ್ನಿ ಎಂದೆ.
ದೊರೆಸ್ವಾಮಿ ಬಂದ. ಯಾಕಪ್ಪಾ, ಏನಾದರೂ ನನ್ನಿಂದ ತಪ್ಪಾಗಿದೆಯೇ? ಯಾಕೆ ಇತ್ತೀಚೆಗೆ ನೋಡಿದರೂ ‘ವಿಶ್’ ಮಾಡುತ್ತಿಲ್ಲ? ಎಂದು ನೇರವಾಗಿ ಕೇಳಿದೆ. ‘ಅಯ್ಯೋ ಹಂಗೆಲ್ಲಾ ಏನೂ ಇಲ್ಲ. ನಂಗೆ ಎರಡೂ ಕಣ್ಣು ಕಾಣ್ತಿಲ್ಲ...
ಇತ್ತೀಚೆಗೆ ಗಾಡಿ ಕೂಡ ಕಟ್ಟೋಕೆ ಆಗ್ತಿಲ್ಲ. ಎರಡೂ ಕಣ್ಣುಗಳಲ್ಲಿ ಪೊರೆ ಬೆಳೆದಿದೆ. ಕಣ್ಣಾಪರೇಷನ್ ಮಾಡಬೇಕು ಅಂದರು. ಅದಕ್ಕೆಲ್ಲಾ ಕಾಸಿಲ್ಲ. ಹಿಂಗೇ ಕಥೆ ಹಾಕ್ತಾ ಇದೀನಿ. ನೀನು ನನಗೆ ಕಾಣಲೇ ಇಲ್ಲ ಅಂದಮೇಲೆ ವಿಶ್ ಮಾಡುವುದು ಎಲ್ಲಿಂದ ಬಂತು. ಅದಕ್ಕೆಲ್ಲಾ ನೀನು ಬೇಜಾರು ಮಾಡ್ಕೋಬೇಡ...’ ದೊರೆಸ್ವಾಮಿ ಹೇಳುತ್ತಾ ಹೋದ.
ಇಂಥವನ ಬಗ್ಗೆ ತಪ್ಪು ಭಾವಿಸಿದೆನಲ್ಲಾ ಎಂದು ನಾನು ಪೇಚಾಡಿಕೊಂಡೆ. ಅವನಿಗೆ ಹೇಗಾದರೂ ಆಪರೇಷನ್ ಮಾಡಿಸಬೇಕು ಎಂದು ನನಗೆ ಅನ್ನಿಸಿತು.
ನನ್ನ ಗೆಳೆಯನೇ ಆದ ವೈದ್ಯನೊಬ್ಬನ ಮನೆ ಹತ್ತಿರವೇ ದೊರೆಸ್ವಾಮಿ ಹೆಚ್ಚು ಓಡಾಡಿಕೊಂಡಿರುತ್ತಿದ್ದ. ಆ ವೈದ್ಯನಿಗೆ ಫೋನ್ ಮಾಡಿದೆ. ದೊರೆಸ್ವಾಮಿಯ ಪರಿಸ್ಥಿತಿ ವಿವರಿಸಿ, ಹಣ ಪಡೆಯದೆ ಕಣ್ಣಾಪರೇಷನ್ ಮಾಡುವಂತೆ ಅವನಲ್ಲಿ ವಿನಂತಿಸಿಕೊಂಡೆ.
1993-94ರ ಕಾಲವದು. ಆಗ ಒಂದು ಕಣ್ಣಿನ ಪೊರೆ ತೆಗೆಯಲು 15-18 ಸಾವಿರ ರೂಪಾಯಿ ಖರ್ಚಾಗುತ್ತಿತ್ತು. ಕನಿಷ್ಠ 8 ಸಾವಿರ ರೂಪಾಯಿ ಕೊಟ್ಟರಷ್ಟೇ ಆಪರೇಷನ್ ಮಾಡಲು ಸಾಧ್ಯ ಎಂದು ನನ್ನ ವೈದ್ಯ ಗೆಳೆಯ ಖಡಾ ಖಂಡಿತವಾಗಿ ಹೇಳಿಬಿಟ್ಟ. ಅದಕ್ಕಿಂತ ಹೆಚ್ಚು ರಿಯಾಯಿತಿ ಕೊಡಲು ಅವನು ಮನಸ್ಸು ಮಾಡಲಿಲ್ಲ.
ಗೆಳೆತನ, ಮಾನವೀಯತೆಯ ಕುರಿತು ಜಿಜ್ಞಾಸೆ ಮೂಡುವುದು ಇಂಥ ಸಂದರ್ಭಗಳಲ್ಲಿಯೇ.
ನನಗೆ ಗೊತ್ತಿರುವ ಪೊಲೀಸ್ ಅಧಿಕಾರಿಗಳನ್ನು ವಿನಂತಿಸಿಕೊಂಡೆ. ಗೆಳೆಯರನ್ನೂ ಕೇಳಿದೆ. ಎಲ್ಲರೂ ಕೈಲಾದಷ್ಟು ಸಹಾಯ ಮಾಡಿದರು. ನಾನೂ ಒಂದಿಷ್ಟು ಸೇರಿಸಿ, ಎಂಟು ಸಾವಿರ ರೂಪಾಯಿ ಹೊಂದಿಸಿದ್ದಾಯಿತು. ಅಂತೂಇಂತೂ ಒಂದು ಕಣ್ಣಾಪರೇಷನ್ ಮಾಡಿಸಿದ್ದಾಯಿತು. ವಾರದ ನಂತರ ದೊರೆಸ್ವಾಮಿ ನನ್ನ ಮನೆಗೆ ಬಂದ. ‘ನೀನೀಗ ಕಾಣ್ತಾ ಇದೀಯ. ಒಂದು ಕಣ್ಣು ಚೆನ್ನಾಗಿ ಕಾಣ್ತಿದೆ. ಅಷ್ಟೇ ಸಾಕು.
ಇನ್ನೊಂದು ಕಣ್ಣು ಹಾಗೇ ಇರಲಿ’ ಎಂದ. ನನ್ನ ಮನಸ್ಸು ಒಪ್ಪಲಿಲ್ಲ. ಕೆಲವು ತಿಂಗಳ ನಂತರ ನಾವು ಗೆಳೆಯರೆಲ್ಲಾ ಸೇರಿ ಆ ಕಣ್ಣಿನ ಆಪರೇಷನ್ ಕೂಡ ಮಾಡಿಸಿದೆವು. ಮುಂದೆ ಅವನು ಮೊದಲಿನಂತೆಯೇ ‘ವಿಶ್’ ಮಾಡುವುದು ಮುಂದುವರಿಯಿತು.
ಒಮ್ಮೆ ನಾನು ಸ್ಥಳೀಯ ಜನ ಒತ್ತಾಯಿಸಿದ್ದರಿಂದ ಗ್ರಾಮದೇವತೆ ಪೂಜೆಗೆ ಅತಿಥಿಯಾಗಿ ಹೋಗಿದ್ದೆ. ಅಲ್ಲಿ ನೂಕುನುಗ್ಗಲು. ಎಲ್ಲರನ್ನೂ ಸೀಳಿಕೊಂಡು ಯಾರೋ ಬರುವುದು ಗೊತ್ತಾಯಿತು. ಜನ ಅವನನ್ನು ಬಾಯಿಗೆ ಬಂದಂತೆ ಬೈಯತೊಡಗಿದರು.
ಯಾರ ಮಾತನ್ನೂ ಲೆಕ್ಕಸದೆ ಅವನು ನನ್ನಲ್ಲಿಗೆ ಬಂದ. ಅವನು ಅದೇ ದೊರೆಸ್ವಾಮಿ. ‘ನಾನು ಬಂದಿದ್ದು ಗ್ರಾಮದೇವರನ್ನು ನೋಡೋದಕ್ಕಲ್ಲ. ನನಗೆ ಕಣ್ಣು ಕೊಟ್ಟ ದೇವರನ್ನು ನೋಡೋಕೆ’ ಅಂದುಬಿಟ್ಟ. ಅಲ್ಲಿದ್ದ ಅನೇಕರಿಗೆ ದೊರೆಸ್ವಾಮಿಗೆ ನಾವೆಲ್ಲಾ ಕಣ್ಣಾಪರೇಷನ್ ಮಾಡಿಸಿದ ಸಂಗತಿ ಗೊತ್ತಾಯಿತು. ‘ಮಾತೆತ್ತಿದರೆ ತರಾಟೆಗೆ ತೆಗೆದುಕೊಳ್ಳುವ ಪೊಲೀಸರು ಇಂಥ ಕೆಲಸವನ್ನೂ ಮಾಡ್ತಾರಾ’ ಎಂದು ಅಲ್ಲಿದ್ದ ಅನೇಕರು ಅಚ್ಚರಿಯಿಂದ ಕೇಳಿದರು.
ಇದು ನನ್ನೊಬ್ಬನ ಅನುಭವ. ಇಂಥ ಸಹಾಯವನ್ನು ಅನೇಕ ಪೊಲೀಸರು ಮಾಡಿದ್ದಾರೆಂಬುದನ್ನು ನಾನು ಕೇಳಿ ಬಲ್ಲೆ. ಆದರೆ, ಪೊಲೀಸರ ಈ ಮುಖ ಎಷ್ಟೋ ಜನರಿಗೆ ಗೊತ್ತಿಲ್ಲವೆಂಬುದೂ ಸತ್ಯ.
***
ನಾನು ವಿಲ್ಸನ್ ಗಾರ್ಡನ್‌ನಲ್ಲಿ ಕೆಲಸ ಮಾಡುವಾಗ ಕೆ.ಪಿ.ಝಡ್. ಹುಸೇನ್ ಎಂಬ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಅವರು ಜಾತ್ಯತೀತರು. ಸೇವಾ ಮನೋಭಾವ ಇದ್ದಂಥವರು. ಎಲ್ಲಿ ದೌರ್ಜನ್ಯ ನಡೆದರೂ ಧೈರ್ಯವಾಗಿ ಬಂದು ನಮ್ಮಂಥ ಪೊಲೀಸರಿಗೆ ತಿಳಿಸುತ್ತಿದ್ದರು. ಅವರಿದ್ದ ಬಡಾವಣೆಯಲ್ಲಿ ಮನೆ ಕಟ್ಟುವಾಗ ಕಾನೂನು ಸಮರವಾಯಿತು. ಅವರು ಮನೆ ಕಟ್ಟುತ್ತಿದ್ದ ಜಾಗದ ಎದುರಲ್ಲಿ ಮಸೀದಿ ಇತ್ತು. ಆಗ ಅಳತೆಯ ವಿಷಯದಲ್ಲಿ ಎದ್ದ ತಕರಾರು ಅದು. ಆ ಸಮಸ್ಯೆಯನ್ನು ಬಗೆಹರಿಸುವಂತೆ ನಾನೇ ಕಾರ್ಪೊ ರೇಷನ್‌ಗೆ ಲೆಟರ್ ಕೂಡ ಬರೆದುಕೊಟ್ಟೆ.
ಆಮೇಲೆ ನನಗೆ ಹೈಕೋರ್ಟ್‌ನ ಬೇಹುಗಾರಿಕಾ ವಿಭಾಗಕ್ಕೆ ವರ್ಗಾವಣೆಯಾಯಿತು. ಆದರೂ ಹುಸೇನ್ ಮನೆಯ ವಿವಾದ ಬಗೆಹರಿದಿರಲಿಲ್ಲ. ಅವರಿಗೆ ಇಬ್ಬರು ಬೆಳೆದ ಹೆಣ್ಣುಮಕ್ಕಳಿದ್ದರು. ಅವರನ್ನು ಕರೆದುಕೊಂಡು ಏನೋ ಕೆಲಸ ಮುಗಿಸಿಕೊಂಡು ವಿಲ್ಸನ್ ಗಾರ್ಡನ್ ಕಡೆಗೆ ತಮ್ಮ ಗೂಡ್ಸ್ ಗಾಡಿಯಲ್ಲಿ ಹುಸೇನ್ ಬರುತ್ತಿದ್ದರು.
ಮಸೀದಿಗೆ ಸಂಬಂಧಪಟ್ಟವರು ಗಾಡಿಯನ್ನು ಅಡ್ಡಗಟ್ಟಿ, ಹುಸೇನರನ್ನು ಅಲ್ಲಿಯೇ ಕೊಚ್ಚಿ ಹಾಕಿದರು. ಆ ಕೊಲೆಗೆ ಇಬ್ಬರೂ ಹೆಣ್ಣುಮಕ್ಕಳು ಸಾಕ್ಷಿಯಾದರು. ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಸಜ್ಜನ ವ್ಯಕ್ತಿಯ ಕೊಲೆಯಲ್ಲಿ ಮುಗಿದದ್ದು ದುರಂತ.
ನ್ಯಾಯಾಲಯದಲ್ಲಿ ಆ ಪ್ರಕರಣದ ವಿಚಾರಣೆ ಶುರುವಾಯಿತು. ಕುಮ್ಮಕ್ಕು ಕೊಟ್ಟವರು, ಕೊಲೆ ಮಾಡಿದವರನ್ನು ಪೊಲೀಸರು ದಸ್ತಗಿರಿ ಮಾಡಿದ್ದರು. ಮಸೀದಿಯವರ ಪರವಾಗಿ ಇಡೀ ವ್ಯವಸ್ಥೆ ನಿಂತಿತು. ಆ ಹೆಣ್ಣುಮಕ್ಕಳು ಸಾಕ್ಷಿ ಹೇಳದಿದ್ದರೆ ಪ್ರಕರಣ ಅವರ ಕಡೆಗೆ ಆಗುವುದೆಂಬ ಖಾತರಿ ಇತ್ತು. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ನನ್ನ ಮೇಲೆ ಒತ್ತಡ ಹಾಕ ತೊಡಗಿದರು.
ಆ ಹೆಣ್ಣುಮಕ್ಕಳು ಸಾಕ್ಷಿ ಹೇಳದಂತೆ ಮಾಡಬೇಕು ಎಂದು ತಾಕೀತು ಮಾಡಿದರು. ಒಂದು ವೇಳೆ ಆ ಮಕ್ಕಳು, ‘ನಮ್ಮ ಜಾಗದಲ್ಲಿ ನೀವೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ’ ಎಂದು ಕೇಳಿದರೆ ನನಗೆ ಉತ್ತರ ಕೊಡಲು ಸಾಧ್ಯವೇ ಇಲ್ಲ. ಹಾಗಾಗಿ ಅವರಿಗೆ ನಾನು ಹಾಗೆ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿಬಿಟ್ಟೆ. ಆ ಮಕ್ಕಳು ನನ್ನ ಮನೆಗೂ ಹುಡುಕಿಕೊಂಡು ಬಂದರು.
‘ಸಾಕ್ಷಿ ಹೇಳಬಾರದು ಎಂದು ನೀವೇ ನಮಗೆ ಹೇಳುತ್ತೀರಿ ಎಂದು ಅನೇಕರು ಮಾತಾಡಿಕೊಳ್ಳುತ್ತಿದ್ದಾರೆ. ನಿಜವೇ?’ ಎಂದು ಕೇಳಿದರು. ನಾನು ಕನಸು ಮನಸಲ್ಲೂ ಹಾಗೆ ಹೇಳಲಾರೆ ಎಂದಾಗ ಅವರಿಗೆ ನೆಮ್ಮದಿ. ‘ಸರ್... ಒಂದು ಕೋಟಿ ಕೊಟ್ಟರೂ ನಾವು ಸಾಕ್ಷಿ ಹೇಳದೇ ಇರುವುದಿಲ್ಲ’ ಎಂದು ಆ ಹೆಣ್ಣು ಮಕ್ಕಳು ದೃಢಸಂಕಲ್ಪದಿಂದ ಹೇಳಿದರು.
ಬಹುಶಃ ಇನ್ನೂ ಆ ಪ್ರಕರಣ ಮುಗಿದಿಲ್ಲವೆನ್ನಿಸುತ್ತೆ. ವ್ಯವಸ್ಥೆಯ ಎದುರು ಈಜುವ ಇಂಥ ಎಷ್ಟೋ ಹೆಣ್ಣುಮಕ್ಕಳಿಂದ ನಾನು ಆತ್ಮವಿಶ್ವಾಸದ ಪಾಠ ಕಲಿತಿದ್ದೇನೆ.
ಮುಂದಿನ ವಾರ: ರಾಜಕಾರಣಿಗಳ ತರ್ಲೆಗಳು

No comments:
Post a Comment